ಚೌಲಮೂಗ್ರ
ಫ್ಲಕುರ್ಷಿಯೇಸೀ ಕುಟುಂಬಕ್ಕೆ ಸೇರಿದ ಒಂದು ಔಷಧಿ ಸಸ್ಯ. ಹಿಡ್ನೋ ಕಾರ್ಪಸ್ ಕುರ್ಜಿಯೈ ಇದರ ಶಾಸ್ತ್ರೀಯ ಹೆಸರು. ಈ ಮರ ಆಗ್ನೇಯ ಏಷ್ಯ ಅದರಲ್ಲೂ ಮುಖ್ಯವಾಗಿ ಇಂಡೋಮಲಯದಲ್ಲಿ ಹೆಚ್ಚಾಗಿ ಹರಡಿದೆ. ಭಾರತದಲ್ಲಿ ಅಸ್ಸಾಮ್, ತ್ರಿಪುರಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಸುಮಾರು 50' ಎತ್ತರಕ್ಕೆ ಬೆಳೆಯುವ ಮರ ಇದು. ರೆಂಬೆಗಳೆಲ್ಲ ಕೆಳಮುಖವಾಗಿ ತೂಗುಬಿದ್ದಿರುತ್ತವೆ. ಎಲೆಗಳು ಉದ್ದುದ್ದ ಇಲ್ಲವೆ ಅಂಡಾಕೃತಿಯವು. ಹೂಗಳು, ಏಕಲಿಂಗಿಗಳು, ಅವುಗಳ ಬಣ್ಣ ಹಳದಿ. ಎಲೆಗಳ ಕಂಕುಳಲ್ಲಿರುವ ಸೈಮೋಸ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಫಲಗಳು ಗುಂಡಗಿವೆ. ವ್ಯಾಸ 3". ಬಣ್ಣ ಚಾಕಲೇಟ್  ಕಂದು. ಒಳಗೆ ಅನೇಕ ಬೀಜಗಳಿವೆ. ಅವು ಕಂದುಬಣ್ಣದ ಗೋಲಿಗಳಂತಿವೆ. ಅವುಗಳಿಂದ ಚೌಲಮೂಗ್ರ ಎಣ್ಣೆಯನ್ನು ಪಡೆಯಲಾಗುತ್ತದೆ. ಈ ಎಣ್ಣೆ  ಕುಷ್ಠ ಹಾಗೂ ಕೆಲವು ಬಗೆಯ ಚರ್ಮರೋಗ ಚಿಕಿತ್ಸೆಗೆ ಉಪಯುಕ್ತವೆನಿಸಿದೆ. ಶಕ್ತಿವರ್ಧಕ ಮತ್ತು ಸ್ಥಳೀಯ ಪ್ರಚೋದಕವಾಗಿ ಬಳಸುವುದುಂಟು. ಸಂಧಿವಾತ, ಚರ್ಮದ ಮೇಲೆ ಹುರುಪೆಗಳೇಳುವುದು ಮುಂತಾದವುಗಳಲ್ಲೂ ಇದರ ಬಳಿಕೆ ಇದೆ. ಇದರ ಬಣ್ಣ ಹಳದಿ ಇಲ್ಲವೆ. ಕಂದು. ಇದಕ್ಕೆ ಹಳಸಿದ ಬೆಣ್ಣೆಯ ವಾಸನೆಯೂ ಕಹಿ ಮತ್ತು ಕಾರ ಮಿಶ್ರಿತ ರುಚಿಯೂ ಇದೆ. 25(ಈ.ಗಿಂತ ಕಡಿಮೆ ಉಷ್ಣತೆಯಲ್ಲಿ ಗಟ್ಟಿಯಾಗುತ್ತದೆ. ಆಲ್ಕೋಹಾಲಿನಲ್ಲಿ ಲಘು ಪ್ರಮಾಣದಲ್ಲೂ ಬೆಂಜಿûೀನ್, ಕ್ಲೋರೋಫಾರಮ್ ಮತ್ತು ಈಥರುಗಳಲ್ಲಿ ಹೆಚ್ಚು ಪ್ರಮಾಣದಲ್ಲೂ ಕರಗುತ್ತದೆ. ಎಣ್ಣೆಯನ್ನು ತೆಗೆದ ಮೇಲೆ ಉಳಿಯುವ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸುವುದಿದೆ. ಕಾಡು ಹಂದಿಗಳು, ಮೀನುಗಳು ಹಣ್ಣನ್ನು ತಿನ್ನುವುದುಂಟು. ಹಣ್ಣು ತಿಂದ ಹಂದಿಯನ್ನಾಗಲೀ, ಮೀನುಗಳನ್ನಾಗಲಿ ತಿನ್ನಬಾರದು. ಏಕೆಂದರೆ ಹಣ್ಣಿನಲ್ಲಿ ವಿಶೇಷವಾಗಿರುವ ಸಯನೊಜನ್ ಯುಕ್ತ ಗ್ಲೈಕೊಸೈಡ್ ಎಂಬ ವಿಷವಸ್ತು ಇವುಗಳಲ್ಲಿ ಮಾಂಸದಲ್ಲಿ ಸೇರಿರುತ್ತದೆ.
(ಕೆ.ಜಿ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ